Saturday 2 February 2013

ಉಳಿಸಿದವನು ಬಾಳಿಯಾನು

ತಿಂಗಳ ಮೊದಲ ವಾರ ಅಂದರೆ ಮನಸ್ಸಿಗೆ ಹುಣ್ಣಿಮೆ. ಇವತ್ತೋ, ನಾಳೇನೋ ಸಂಬಳ ಅನ್ನೋ ಖುಷಿ. ಹಾಗೇನೇ ಕೊನೆ ವಾರ ಎದುರಾದರೆ ಅಮಾವಾಸ್ಯೆ. ಕೈಯಲ್ಲಿ ಬಿಲ್‌ಕುಲ್‌ ಕಾಸಿರೋಲ್ಲ. ಬಂದ ಹಣ ಎಲ್ಲಿ, ಹೇಗೆ ಹೋಯಿತು? ಮತ್ತೆ ಹುಣ್ಣಿಮೆ ವಾರದ ಕನವರಿಕೆ.
ತಿಂಗಳ ಪಗಾರ ನಂಬಿಕೊಂಡಿರುವ ಪ್ರತಿಯೊಬ್ಬರ ಪಾಡು ಇದು. ಕೊರಗು ಜಾಸ್ತಿ ಆಗುತ್ತದೆ ಎಂದೇ ಯಾರೂ ತಿಂಗಳ ಖರ್ಚು ಎಷ್ಟಾಗಿದೆ ಅಂಥ ಲೆಕ್ಕ ಹಾಕುವುದಿಲ್ಲ. ಸಂಬಳ ದಿನವನ್ನು ಚಾತಕ ಪಕ್ಷಿಯಂತೆ ಕಾದು, ನಂತರ ಇಡೀ ತಿಂಗಳನ್ನು ಅದೇ ಆಸೆಯಲ್ಲಿ ನೂಕುವುದು ಮಿಡಲ್‌ಕ್ಲಾಸ್‌ ಕಾಮನ್‌ ಮೆಂಟಾಲಿಟಿ. ನೀವು ಕೇಳಿರಬಹುದಿದು - 'ಅದ್ಯಾಕೋ ಬಂದ ಹಣ ಕೈಯಲ್ಲೇ ನಿಲ್ಲಲ್ಲ ರೀ...' ಅನ್ನೋರನ್ನ. ನಿಜ, ಹಣ ದುಡಿಯುವುದು ಕಷ್ಟ ಎನಿಸಲ್ಲ, ದುಡಿದ ಹಣವನ್ನು ಕೂಡಿಡುವುದು ತ್ರಾಸೋ, ತ್ರಾಸು. ಹೂಡಿಕೆಗೆ ಎಷ್ಟೊಂದು ಮಾರ್ಗ ಇದೆ ಅನ್ನೋದೇನೋ ಸತ್ಯ. ಹೂಡುವವರು ಇರುವುದರಿಂದ ಉಳಿತಾಯಕ್ಕೆ ದಾರಿ ನೂರಾರುಂಟು.
ಪಿಎಫ್, ಆರ್‌ಡಿ, ಪಿಪಿಎಫ್, ಮುೂÂಚುಯಲ್‌ ಫ‌ಂಡ್‌, ಫಿಕ್ಸೆಡ್‌ ಡಿಪಾಸಿಟ್‌ ಅಂತೆ. ಇದಕ್ಕೂ ಮುಂದೆ ಹೋಗಿ ಐಡಿಎಫ್ಸಿ, ಐಎನ್‌ಜಿ ಡಿವಿಡೆಂಡ್‌ ಯೀಲ್ಡ್‌, ಬಿರ್ಲಾ ಸನ್‌ ಲೈಫ್ ಅಂತೇನೇನೋ ಇವೆ. ರೇಸಿನ ಕುದುರೆಗಳ ಹಾಗೆ ಲಾಭ ಹಾಗೂ ಬಡ್ಡಿ ಕೊಡುವುದಕ್ಕೆ ಮಾರುಕಟ್ಟೆಯಲ್ಲಿ ನಿಂತಿವೆ. ಆದರೆ ಅರೆ ಕಾಸಿನ ಮಜ್ಜಿಗೆಯಂತೆ ಬರುವ ಸಂಬಳವನ್ನು ಉಳಿಸಿ ಬೆಳೆಸುವುದು ಹೇಗೆ?
ಬಳಸಿಕೊಳ್ಳುವ ಮಾತಿರಲಿ, ಬಂದ ಸಂಬಳ ಅಥವಾ ಆದಾಯವನ್ನು ನಾವು ಹೇಗೆ ಮೇನೇಜ್‌ ಮಾಡುವುದು? ಸಂಬಳದಲ್ಲಿ ಹೂಡಿಕೆಗೆ ಹಣ ಕೂಡಿಡುವುದು ಹೇಗೆ?
ಬದುಕು, ಹಣ, ಅಧಿಕಾರ, ಸಮಯ ಎಲ್ಲವೂ ಅಮೂಲ್ಯ. ಇವು ನಮಗೆ ದೊರಕಿದಾಗ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ಭವಿಷ್ಯ ನಿಂತಿರುತ್ತದೆ. ಹಾಗಂತ ಕೂಡಿಡುವುದೇ ಜೀವನ ಎನ್ನುವುದರಲ್ಲಿ ಅರ್ಥವಿಲ್ಲ. ಹಾಗೇ ಮಾಡಿದ್ದೇ ಆದರೆ ದುಡಿಯುವುದು ಯಾವ ಪುರುಷಾರ್ಥಕ್ಕೆ? ಇನ್ನು ಮಜಾ ಮಾಡುವುದು ಯಾವಾಗ ಅಂಥ ಅನಿಸಲು ಶುರುವಾಗಿಬಿಡುತ್ತದೆ. ಆಗ ಕೈಗೆ ಬಂದ ಸಂಬಳ ಪೂರ್ತಿ ಖಲಾಸ್‌ ಆಗುವ ಅಪಾಯವೂ ಉಂಟು. ಈ ಕಾರಣಕ್ಕೆ ಬಂದ ಸಂಬಳವನ್ನು ಹೇಗೆ ಬಳಸಬೇಕು ಅನ್ನೋ ಕಲೆ ತಿಳಿದಿರಬೇಕು. ಕರಗತವಾಗಲು ಕೆಲ ಕಸರತ್ತು ಮಾಡಬೇಕಾಗುತ್ತದೆ. ಇದಕ್ಕೆ ಸ್ವಲ್ಪ ತಾಳ್ಮೆಯೂ ಬೇಕು.
ಮೊದಲು ನೀವು ತಿಂಗಳ ಬಜೆಟ್‌ ಚಾರ್ಟ್‌ ಮಾಡಿಕೊಳ್ಳಿ. ಆದಾಯ ಮೂಲಗಳು ಒಂದು ಕಡೆ ಬರೆದುಕೊಳ್ಳಿ. ಆದಾಯ ಎಂದರೆ ಸಂಬಳ ಮಾತ್ರವಲ್ಲ. ಸ್ನೇಹಿತರಿಂದ ಬರಬೇಕಾದ ಬಾಕಿ, ಅಂಗಡಿ ಅಥವಾ ಮನೆ ಬಾಡಿಗೆಗಳು, ಇನ್ಸೆಂಟೀವ್‌ ಇತ್ಯಾದಿ, ಇತ್ಯಾದಿ. ಇನ್ನೊಂದು ಕಡೆ ತಿಂಗಳ ಖರ್ಚು ಎಷ್ಟಾಗುತ್ತಿದೆ ಎನ್ನುವುದನ್ನ ಬರೆದುಕೊಳ್ಳಿ. ಖರ್ಚು ಬರೆಯುವಾಗ ಎಲ್ಲೆಲ್ಲಿ, ಹೇಗೆ ಖರ್ಚಾಗುತ್ತಿದೆ ಎನ್ನುವ ಸಣ್ಣ, ಸಣ್ಣ 'ವ್ಯಯ ವಿವರ' ಇರಬೇಕು. ಇದು ತಿಂಗಳಿಗೆ ಒಂದು ದಿನ ಕುಳಿತರೆ ಸಾಕು. 1,2ಗಂಟೆಯಲ್ಲಿ ಆಗುವ ಕೆಲಸ ಅಥವಾ ದಿನಂಪ್ರತಿ ಲೆಕ್ಕ ಬರೆಯುವ ತಾಳ್ಮೆ, ಉತ್ಸಾಹ ಇದ್ದರೆ ಇನ್ನೂ ಒಳ್ಳೆಯದು.
ಈ ರೀತಿ ಮಾಡುವುದರಿಂದ ಹಣದ ಹರಿವು ಎಲ್ಲೆಲ್ಲಿ, ಹೇಗೇಗೆ ಆಗುತ್ತಿದೆ ಅನ್ನೋದು ಬಹಳ ಬೇಗ ಗೊತ್ತಾಗುತ್ತದೆ. ತಿಂಗಳಲ್ಲಿ ಒಂದು ದಿನ ಈ ಲೆಕ್ಕ ಪರಿಶೋಧನೆ ಮಾಡಿದರೆ ಅನಗತ್ಯವಾಗಿ ಪೋಲ್‌ ಆಗುತ್ತಿರುವುದು ಎಲ್ಲಿ ಎನ್ನುವುದು ಬಹಳ ಬೇಗ ತಿಳಿಯುತ್ತದೆ. ಬಹುತೇಕರು ಈಗ ಲೆಕ್ಕ ಇಡುವುದಿಲ್ಲ. ಇಟ್ಟವರು ಅದನ್ನು ತೆಗೆದು ಸೋರಿಕೆಯ ದಾರಿಗಳನ್ನು ಹುಡುಕುವುದಿಲ್ಲ. ಸಂಬಳದಲ್ಲಿ ಶೇ. 20ರಷ್ಟು ಇಂಥ ಅನಗತ್ಯ, ಅನಾವಶ್ಯಕವಾಗಿ ಹಣ ಖರ್ಚಾಗಿರುತ್ತದೆ. ಅದು ಯಾವುದು? ಹೇಗೆ ತಡೆಯುವುದು ಎನ್ನುವುದನ್ನು ಮಂತ್ಲಿ ಮ್ಯಾತ್ಸ್ನಲ್ಲಿ ಗೊತ್ತಾಗುತ್ತದೆ. ಇದು ಯಾವ ರೀತಿ ಎಂದರೆ ರೈತರು ನೀರು ಕಟ್ಟುವ ಹಾಗೆ. ಒಂದು ಗಿಡಕ್ಕೆ ಜಾಸ್ತಿಯಾದರೆ ಅದೇ ನೀರನ್ನು ಗೆನುಮೆ ಹೊಡೆದು ಇನ್ನೊಂದು ಗಿಡದ ಪಾತಿಗೆ ತಿರುಗಿಸುತ್ತಾರಲ್ಲ ಹಾಗೇನೇ. ಅನಗತ್ಯ ಖರ್ಚುಗಳನ್ನು ಉಳಿತಾಯದೆಡೆಗೆ ತಿರುಗಿಸುವುದು. ಅನಗತ್ಯ ಖರ್ಚು ಎಂದರೆ ಉದಾಹರಣೆಗೆ- ನೀವು ಬ್ರಾಂಡೆಡ್‌ ಶರ್ಟು, ಮಿಕ್ಸಿಗಳನ್ನೇ ಕೊಳ್ಳುತ್ತೀರಿ ಅಂತಿಟ್ಟು ಕೊಳ್ಳೋಣ. ಇದೇ ಗುಣಮಟ್ಟದ, ಕಡಿಮೆ ಬೆಲೆಗೆ ಸಿಗುವ ಇನ್ನೊಂದು ಬ್ರಾಂಡ್‌ ವಸ್ತುಗಳನ್ನು ಕೊಳ್ಳುವುದರಿಂದ ಶೇ. 10-20ರಷ್ಟು ಉಳಿಸಬಹುದು. ಇದೊಂದೇ ಅಲ್ಲ. ತೊಗರಿಬೇಳೆಗೆ ಬನ್ನಿ. ಗಣೇಶ ಜಾಸ್ತಿ, ಶಿವಲಿಂಗು ಕಡಿಮೆ. ಅಕ್ಕಿಯಲ್ಲಿ 40ರೂ. ಅಕ್ಕಿ ಬೇಡ. ಹೋಲ್‌ಸೇಲ್‌ನಲ್ಲಿ ಇದೇ ಗುಣಮಟ್ಟದ್ದು 35ರೂ.ಗೂ ಸಿಗಬಹುದು. ಹೀಗೆ ಉಳಿಸಿದರೆ ಉಳಿತಾಯವನ್ನು ಹೂಡಿಕೆ ಮಾಡಬಹುದು.
ವಯಸ್ಸು ಮುಖ್ಯ...
ಬಂದ ಸಂಬಳವನ್ನು ಎಷ್ಟು ಉಳಿಸಬೇಕು? ಎಷ್ಟು ಖರ್ಚು ಮಾಡಬೇಕು? ಇದು ಬಹುಮುಖ್ಯವಾದ ಪ್ರಶ್ನೆ. ಬಹುತೇಕರು ಬಂದ ಸಂಬಳಕ್ಕೆ lic ಸಿಗೆ ಇಷ್ಟು ಅಂಥ ಕಟ್ಟಿ ಮಿಕ್ಕದ್ದನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಹಾಗಾದರೆ ಕ್ರಮ ಬದ್ಧ ಉಳಿತಾಯ ಹೇಗೆ ? ಅನ್ನೋದು ಯೋಚಿಸುವುದೂ ಇಲ್ಲ. ಇನ್ನೂ ಕೆಲವು ಭೂಪರಿದ್ದಾರೆ. ಸಂಬಳದಲ್ಲಿ ಡಿಡೆಕ್ಟ್ ಆಗುವ ಪಿಎಫ್ ಹಣವೇ ಸಾಕು ಎಂದು ಸಂಬಳವನ್ನೆಲ್ಲಾ ಬಳಿದು ಬಿಡುತ್ತಾರೆ.ಉಳಿತಾಯದ ವಿಚಾರಕ್ಕೆ ಬಂದರೆ ನಿಮ್ಮ ವಯಸ್ಸು ಮುಖ್ಯವಾಗುತ್ತದೆ. ವಯಸ್ಸು 25 ವರ್ಷ ಆಗಿದ್ದು, ಮದುವೆ ಆಗದೇ ಇದ್ದರೆ ಉಳಿತಾಯಕ್ಕೆ ಒಳ್ಳೆಯ ಕಾಲ. 25ನೇ ವಯಸ್ಸಿಗೆ ಕೆಲಸಕ್ಕೆ ಸೇರಿದರೆ ಈ 5 ವರ್ಷದಲ್ಲಿ ಸಂಪೂರ್ಣ ಉಳಿತಾಯ ಮಾಡಬಹುದು. 21ವರ್ಷಕ್ಕೆ ಕೆಲಸ ಸಿಕ್ಕರೆ ನಿಮ್ಮ ಒಟ್ಟು ಸರ್ವೀಸ್‌ 38 ವರ್ಷ. ಇದರಲ್ಲಿ ಮೊದಲು 5 ವರ್ಷ ಆರ್ಥಿಕ ಭವಿಷ್ಯದ ಅಡಿಪಾಯ. ಈ ಅವಧಿಯಲ್ಲಿ ಹೆಚ್ಚಿನ ಹೊಣೆಗಾರಿಕೆ ಇಲ್ಲದೆ ಇರುವುದರಿಂದ ಗರಿಷ್ಠ ಹಣವನ್ನು ಉಳಿಸಬಹುದು. ಆದರೆ ಮಾಗದ ವಯಸ್ಸು ಅನಗತ್ಯ ವ್ಯಯಕ್ಕೆ ಪ್ರೋತ್ಸಾಹಿಸುತ್ತದೆ ಎನ್ನುವ ಎಚ್ಚರಿಕೆ ಇರಬೇಕು. ಈಗಂತು ಮದುವೆ ಎಂದರೆ ಏಜು 30 ಆಗಿರಬೇಕು. ಒಂದು ಪಕ್ಷ ನಿಮ್ಮ ವಯಸ್ಸು 30-35 ದಾಟಿದ್ದರೂ ತೊಂದರೆ ಇಲ್ಲ. ಉಳಿತಾಯಕ್ಕೆ ಪ್ಯಾಡ್‌ ಕಟ್ಟಿಕೊಂಡು ಇಂದಿನಿಂದಲೇ ಬ್ಯಾಟಿಂಗ್‌ ಪ್ರಾರಂಭಿಸಿ. ಬ್ಯಾಚುಲರ್‌ಗಳಿಗೆ ಖರ್ಚು ಕಡಿಮೆ ಇರುವುದರಿಂದ ಕನಿಷ್ಠ ಶೇ. 50ರಷ್ಟು ಸಂಬಳವನ್ನಾದರು ಉಳಿಸಬೇಕು. ಅದೇ ನೀವು 30ವರ್ಷ+ ಮದುವೆ ಆಗಿದ್ದರೆ ಶೇ. 30ರಷ್ಟು ಉಳಿಸಿ.
30 ವರ್ಷ+ ಮಕ್ಕಳಾಗಿದ್ದರೆ ಆಗಿದ್ದರೆ ಶೇ.20ರಷ್ಟು, 40ರ ನಂತರ ಶೇ. 15ರಷ್ಟು ಉಳಿಸುತ್ತಾ ಹೋಗಬಹುದು.
ಇಲ್ಲಿ ಏಜು ಎಷ್ಟು ಮುಖ್ಯವೋ ಯಾವಾಗ ನಿವೃತ್ತಿ ಹೊಂದುತ್ತೀರಿ ಎನ್ನುವುದೂ ಅಷ್ಟೇ ಮುಖ್ಯ. 58ವರ್ಷಗಳ ತನಕ ದುಡಿಯಬೇಕು ಅನ್ನುವುದಾದರೆ ತಿಂಗಳ ಸಂಬಳದಲ್ಲಿ ಅಷ್ಟೂ ವರ್ಷಕ್ಕೆ ಉಳಿತಾಯ ಮೊತ್ತ ವಿಸ್ತರಿಸಬೇಕು. 40ವರ್ಷಕ್ಕೆ ನಿವೃತ್ತಿಯಾಗುವ ಯೋಚನೆ ಇದ್ದರೆ ಉಳಿತಾಯದ ಮೊತ್ತವನ್ನು ಏರಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೊಂದು ಉದಾಹರಣೆ ನೋಡೋಣ- ನಿಮ್ಮ ವಯಸ್ಸು 30-ಸಂಬಳ 30 ಸಾವಿರ ಎಂದಿಟ್ಟು ಕೊಂಡರೆ ಮನೆ ಬಾಡಿಗೆ ಶೇ. 20ರಷ್ಟು, ಮನೆ ಖರ್ಚು, ಶೇ. 15ರಷ್ಟು, ಮಕ್ಕಳ ಖರ್ಚು ಶೇ. 15 ರಷ್ಟು, ಮನೆ ಸದಸ್ಯರ ಖರ್ಚು ಶೇ.10ರಷ್ಟು. ತುರ್ತು ನಿಧಿಗೆ ಶೇ. 5ರಷ್ಟು ಎತ್ತಿಡಿ. ಶೇ. 30.ರಷ್ಟು ವಿಮೆ, ಆರ್‌ಡಿ, ಪಿಪಿಎಫ್ಗಾಗಿ. ಶೇ. 5ರಷ್ಟು ಪ್ರವಾಸ ಇತರೆ ಖರ್ಚಿಗೆ. ಹೀಗೆ ವಿಂಗಡಣೆ ಮಾಡಬಹುದು. ವಯಸ್ಸು ಏರುಪೇರಾದಂತೆ ಖರ್ಚು, ಉಳಿತಾಯದಲ್ಲೂ ವ್ಯತ್ಯಾಸವಾಗುತ್ತದೆ. ಆಗ ರೈತರು ಗದ್ದೆಯಲ್ಲಿ ನೀರು ಕಟ್ಟಲು ಬದುಗಳನ್ನು ಬದಲಾಯಿಸುತ್ತಿರಬೇಕು. ನಿಮಗೆ ಗೊತ್ತಿರಬೇಕಾದ ವಿಚಾರ ಎಂದರೆ ನಮ್ಮಲ್ಲಿ ಶೇ. 41ರಷ್ಟು ಜನರ ಉಳಿತಾಯಕ್ಕೆ ಕತ್ತರಿ ಹಾಕುತ್ತಿರುವುದು ವೈದ್ಯಕೀಯ ಚಿಕಿತ್ಸೆ. ಶೇ.45ರಷ್ಟು ಜನಕ್ಕೆ ಅನಿರೀಕ್ಷಿತ ಖರ್ಚುಗಳು, ಶೇ. 36ರಷ್ಟು ಉಳಿತಾಯ ಮಕ್ಕಳ ಓದು, ಫೀಗಂತೆ.
ಇನ್ನು ಸ್ವಂತ ಬಿಜಿನೆಸ್‌ ಮಾಡುವವರಿಗೆ ಇಷ್ಟೇ ಉಳಿಸಿ ಎಂದು ಹೇಳುವುದು ಕಷ್ಟ. ಅವರೂ ಆದಾಯದ ಶೇ.20ರಷ್ಟಾದರೂ ಉಳಿತಾಯ ಮಾಡಿದರೆ ಒಳಿತು.
ಸಣ್ಣ ಮೊತ್ತದ ಆದಾಯವನ್ನು ಎತ್ತಿಟ್ಟು ತಿಂಗಳ ಕೊನೆಗೆ ದೊಡ್ಡ ಮೊತ್ತವಾದ ಮೇಲೆ ಇಲ್ಲಿ ಹೂಡಬಹುದು. ಸಿಪ್‌ಅನ್ನು ಮಾಡಿಸಿ, ಅಕೌಂಟಿನಿಂದಲೇ ಹಣ ಪಾವತಿಯಾಗುವಂತೆ ನೋಡಿಕೊಂಡರೆ ಅರ್ಧಕರ್ಧ ತಲೆನೋವು ಕಡಿಮೆಯಾದಂತೆ.
ಇಲ್ಲಿ ಒಂದು ವಿಚಾರ ಗಮನಿಸಬೇಕು. ವಯಸ್ಸು ಹೆಚ್ಚುತ್ತಾ ಹೋದಂತೆ ಸಂಬಳದಲ್ಲಿ ಉಳಿಸಿದ ಹಣದಲ್ಲಿ ಶೇ. 50ರಷ್ಟು ನಗದು ರೂಪದಲ್ಲಿ ಇಟ್ಟು ಕೊಳ್ಳುವುದು ಲೇಸು ಅಥವಾ ಹಣದ ಅವಶ್ಯಕತೆ ಬಿದ್ದ ತಕ್ಷಣ ಉಪಯೋಗಕ್ಕೆ ಬರುವಂತೆ ಬಜೆಟ್‌ ರೂಪಿಸಿ. ಆಗ ತಿಂಗಳ 30ದಿನವೂ ಹುಣ್ಣಿಮೆ.

support our children to learn finance and money from their own efforts.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಹೆಚ್ಚಿನವರ ಕನಸು. ಅಧ್ಯಯನ, ಕ್ರೀಡೆ, ಸಂಗೀತ ಅಥವಾ ಇನ್ಯಾವುದೋ ಚಟುವಟಿಕೆಗಳಲ್ಲಿ ಮಕ್ಕಳು ಪ್ರಗತಿ ಕಾಣಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಹೆಚ್ಚಿನವರು ಮಕ್ಕಳಿಗೆ ದುಡ್ಡು ಉಳಿತಾಯ ಮಾಡುವ ಬಗ್ಗೆ ಹೇಳಿಕೊಡುವುದೇ ಇಲ್ಲ. 
 
 ಮಕ್ಕಳಿಗೆ ಹಣದ ಶಿಕ್ಷಣವನ್ನು ಗುರುಕುಲ ಶಿಕ್ಷಣ ಕಾಲದಲ್ಲಿಯೇ ಕಲಿಸಿಕೊಡಲಾಗುತ್ತಿತ್ತು. ಶಿಷ್ಯರು ತಾವೇ ಸ್ವಂತ ದುಡಿದ ಹಣವನ್ನು ಗುರು ದಕ್ಷಿಣೆಯಾಗಿ ನೀಡಬೇಕಿತ್ತು. ಈ ಮೂಲಕ ಹಣಕಾಸು ಸ್ವಾತಂತ್ರ್ಯದ ಪಾಠವನ್ನು ಹೇಳಿಕೊಡಲಾಗುತ್ತಿತ್ತು. ನಾವು ಬಾಲ್ಯದಲ್ಲಿ ಡಬ್ಬಿಯಲ್ಲಿ ಒಂದೊಂದು ರುಪಾಯಿ ಕೂಡಿಡುತ್ತಿದ್ದೇವು. ಸ್ಕೂಲ್ ಡೇಗೆ ಬಟ್ಟೆ ಖರೀದಿಸಲು ಅಥವಾ ವರ್ಷದ ಪಿಕ್ ನಿಕ್ ಹೋಗಲು ಆ ದುಡ್ಡು ಸಾಕಾಗುತ್ತಿತ್ತು. ಈಗ ಹೆಚ್ಚಿನ ಮಕ್ಕಳು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಹೆಚ್ಚಿನವರಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ಉಳಿಸುವುದಕ್ಕೆ ಗೊತ್ತಿಲ್ಲದ ಮೇಲೆ ಎಷ್ಟು ಗಳಿಸಿದರೆ ಏನು ಪ್ರಯೋಜನ?
 
 ಮಕ್ಕಳಿಗೆ ಹಣದ ಮಹತ್ವ ತಿಳಿಸಲು ಕೆಲವು ದಾರಿಗಳು
 
 * ಹಣಕಾಸು ಬಗ್ಗೆ ಕಲಿಯಲು ಮಕ್ಕಳಿಗೆ ನಾವು ಬೆಂಬಲ ನೀಡಬೇಕು. ನೀತಿ ಕಥೆ ಮತ್ತು ಆಟಗಳಲ್ಲಿ ಹಣದ ಮಹತ್ವವನ್ನು ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಡಬಹುದು. ಉದಾಹರಣೆಗೆ: ಒಂದೂರಿನಲ್ಲಿ ಒಬ್ಬ ಇದ್ದ. ಆತ ಹಣವನ್ನು ಪೋಲು ಮಾಡುತ್ತಿದ್ದ... ಇತ್ಯಾದಿ ಕಥೆಗಳನ್ನು ಹೇಳಬಹುದು.
 
 * ಮಕ್ಕಳು ಬೆಳೆಯುತ್ತಿದ್ದಂತೆ ಹೆಚ್ಚು ಹೆಚ್ಚು ಹಣದ ಅವಶ್ಯಕತೆ ಬೀಳಬಹುದು. ಮಕ್ಕಳು ಖರ್ಚು ಮಾಡುವ ಪ್ರಮಾಣವೂ ಜಾಸ್ತಿಯಾಗಬಹುದು. ಅವರಿಗೆ ಹಣದ ಮೌಲ್ಯದ ಕುರಿತು ತಿಳಿಸಿಹೇಳಿ. ಹಣಕ್ಕಾಗಿ ಕಷ್ಟಪಟ್ಟ, ದುಡಿಯಲು ಆರಂಭಿಸಿದ ನಿಮ್ಮ ಕಥೆಗಳನ್ನು ಹೇಳಿರಿ. ಹಣ ಉಳಿತಾಯ ಮಾಡುವ ಅವಶ್ಯಕತೆಯನ್ನು ಹೇಳಿರಿ. ಹಣ ಪೋಲು ಮಾಡಬಾರದೆಂದು ತಿಳಿಸಿರಿ. 
 
* ಮಕ್ಕಳು ಕೆಲವೊಮ್ಮೆ ಅನವಶ್ಯಕ ಬೇಡಿಕೆಗಳನ್ನು ಇಡಬಹುದು. ಅದು ಅನಗತ್ಯ ಖರ್ಚಿಗೆ ದಾರಿಯಾಗಬಹುದು. ಅವರ ಬೇಡಿಕೆಯು ಯಾಕೆ ವ್ಯರ್ಥವೆಂದು ಅವರಿಗೆ ಅರ್ಥವಾಗುವಂತೆ ಬಿಡಿಸಿಹೇಳಿ. ಮಕ್ಕಳಿಗೆ ಇದು ಅರ್ಥವಾದರೆ ನಂತರ ಅನಗತ್ಯ ಬೇಡಿಕೆಗಳನ್ನು ಇಡುವುದಿಲ್ಲ. * ಮಕ್ಕಳ ಹೆಚ್ಚಿನ ಅವಶ್ಯಕತೆಗಾಗಿ ಫಿಕ್ಸ್‌ಡ್ ಅಥವಾ ಇಂತಿಷ್ಟು ಹಣ ನಿಗದಿ ಮಾಡಿ ನೀಡಿ. ಉದಾಹರಣೆಗೆ ಶೂ ಬೇಕೆಂದರೆ 500 ರುಪಾಯಿ ನೀಡಿ. ಅದರಲ್ಲಿ ಹಣ ಉಳಿಸೋಕೆ ಹೇಳಿ. ಅವರು ಎಷ್ಟು ವಾಪಸ್ ಕೊಡುತ್ತಾರೆ ಎಂದು ನೋಡಿ. 
 
* ಈಗ ಹೆಚ್ಚಿನವರು ಮಕ್ಕಳಿಗೆ ತಿಂಗಳಿಗೆ ಇಂತಿಷ್ಟು ಎಂದು ದುಡ್ಡು ನೀಡುತ್ತಾರೆ. ಹಣವನ್ನು ಅವರು ಹೇಗೆ ವೆಚ್ಚ ಮಾಡುತ್ತಾರೆಂದು ನಿಗಾ ಇಡಿ. ಪ್ರತಿತಿಂಗಳು ಯಾವುದಕ್ಕೆಲ್ಲ ಖರ್ಚು ಮಾಡಿದ್ದಾರೆಂಬ ಮಾಹಿತಿ ನೀಡಲು ಹೇಳಿ. ಮಕ್ಕಳು ವೆಚ್ಚ ನಿಯಂತ್ರಿಸಲು ಕಲಿತರೆ ಅವರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿರಿ. 
 
 * ಕೆಲವೊಮ್ಮೆ ಮಕ್ಕಳು ತಮ್ಮ ಸ್ನೇಹಿತರಿಂದ ಹಣ ಸಾಲ ಪಡೆಯಬಹುದು. ಅದಕ್ಕೆ ಬಡ್ಡಿ ನೀಡಿ ವಾಪಸ್ ನೀಡಲು ಹೇಳಿ. ಇದರಿಂದಾಗಿ ಮಕ್ಕಳಿಗೆ ಬಡ್ಡಿ ಮತ್ತು ಹೂಡಿಕೆಯ ಪಾಠವೂ ದೊರಕುತ್ತದೆ. ಇದರಿಂದ ಉಳಿತಾಯದ ಮನೋಭಾವವೂ ಹೆಚ್ಚಾಗುತ್ತದೆ. 
 
 * ಮಕ್ಕಳು ಹಣದ ಕುರಿತಾಗಿ ಯಾವುದಾದರೂ ಸಂಶಯ ಪ್ರಕಟಿಸಿದರೆ ಅವರಿಗೆ ಅರ್ಥವಾಗುವಂತೆ ತಿಳಿಸಿ. ಹಣ, ಉಳಿತಾಯ, ಬ್ಯಾಂಕ್, ಹೂಡಿಕೆ, ಕರೆನ್ಸಿ ಮಾರುಕಟ್ಟೆ ಇತ್ಯಾದಿ ಪಾಠಗಳನ್ನು ಮಾಡುತ್ತಿರಿ. 
 
* ಮಕ್ಕಳಿಗೆ ದುಡ್ಡು ಕಳೆದುಕೊಂಡು ಕೂಡ ಅಭ್ಯಾಸವಾಗಬೇಕು. ನೂರು ರುಪಾಯಿ ಬ್ಯಾಗಿಗೆ 200 ರುಪಾಯಿ ಕೊಟ್ಟರೆ ಅವರಿಗೆ ನೂರು ರುಪಾಯಿ ನಷ್ಟವಾದ ಬಗ್ಗೆ ಹೇಳಬೇಕು. 
 
 * ಹಣವನ್ನು ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ. 
 
 * ಮನೆಯಲ್ಲೊಂದು ಹಣ ಹಾಕುವ ಡಬ್ಬಿ ಇರಲಿ. ಚಿಲ್ಲರೆಯನ್ನೆಲ್ಲ ಅದಕ್ಕೆ ಹಾಕಲು ಹೇಳಿ. ದಿನಕ್ಕೆ ಒಂದು ರುಪಾಯಿ ಹಾಕಿದ್ರೂ ವರ್ಷಕ್ಕೆ 350 ರುಪಾಯಿ ದಾಟುತ್ತದೆ. ಮಕ್ಕಳು ಹಣ ಉಳಿಸಲು ಕಲಿತರೆ ಅವರ ಭವಿಷ್ಯದಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ. ಹಣದ ವಿಷಯದಲ್ಲಿ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಿ. ಕೇಳಿದನ್ನೆಲ್ಲ ಕೊಡಬೇಡಿ.

step by step ಆನ್‌ಲೈನ್‌ನಲ್ಲಿ ಪಿಎಫ್ ಮಾಹಿತಿ



ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೈಷನ್ (EPFO) ಈಗ ಭವಿಷ್ಯ ನಿಧಿ (provident fund) ಖಾತೆ ಮಾಹಿತಿಗಳನ್ನು ಆನ್ ಲೈನಲ್ಲಿ ನೀಡುತ್ತಿದೆ. ಈಗ ಅಂತರ್ಜಾಲ ತಾಣ (www.epfindia.com) ಮೂಲಕ ಎಲ್ಲಾ ಮಾಹಿತಿ ನಿಮ್ಮ ಬೆರಳಿ ತುದಿಯಲ್ಲಿ ಲಭ್ಯವಾಗಲಿದೆ

 ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಈಗ ಆನ್ ಲೈನ್ ಮೂಲಕ ಸಾಧ್ಯ. ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ನಿಮಗೆ ತಿಳಿದಿದೆಯಾ? ಹೋಗಲಿ, ನಮ್ಮ ಖಾತೆಯಲ್ಲಿ ಎಷ್ಟು ಉಳಿತಾಯವಾಗಿದೆ, ಎಲ್ಲಿ ವಿಷಯಗಳನ್ನೆಲ್ಲ ತಿಳಿದುಕೊಳ್ಳುವ ವಿಧಾನ ಇಲ್ಲಿ ನೀಡಲಾಗಿದೆ.

 ಭವಿಷ್ಯ ನಿಧಿ ಖಾತೆ ಬ್ಯಾಲೆನ್ಸ್ ನೋಡುವುದು ಹೀಗೆ :

 1. EPF ಬ್ಯಾಲೆನ್ಸ್ ತಿಳಿಯಲು ಲಿಂಕ್ಕ್ಲಿಕ್ Click Link ಮಾಡಿ 

 2. ನಿಮ್ಮ PF ಖಾತೆ ಹೊಂದಿರುವ EPFO ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ PF ಖಾತೆ ಸಂಖ್ಯೆ ನಮೂದಿಸಿ 
3. extension ಜಾಗ ಹಾಗೇ ಬಿಡಿ ಏನನ್ನೂ ತುಂಬಿಸಬೇಡಿ 

4. ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಹಾಕಿ (PF ಖಾತೆ ಜೊತೆ ನೀಡಿದ ಮೊಬೈಲ್ ಸಂಖ್ಯೆಯನ್ನೇ ನೀಡತಕ್ಕದ್ದು

5. ಅರ್ಜಿ ಸಲ್ಲಿಕೆ ಪೂರ್ಣಗೊಂಡನಂತರ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ.

 ಪಿಎಫ್ ಹಣ ಪಡೆಯುವ ಬಗೆ ಸ್ಥಿತಿ ಗತಿ: 

 ಭವಿಷ್ಯ ನಿಧಿ ಸದಸ್ಯರು/ಚಂದಾದಾರರು/ಪಿಂಚಣಿದಾರರಿಗೆ ಸೌಲಭ್ಯ ಲಭ್ಯವಿರುತ್ತದೆ. ದೇಶದ ಯಾವುದೇ EPFO ಕಚೇರಿಯಲ್ಲಿ PF ಹಣ ಕ್ಲೇಮ್ ಮಾಡಿದ್ದರೆ ಸೌಲಭ್ಯ ಬಳಸಿ ಸ್ಥಿತಿ ಗತಿ ತಿಳಿಯಬಹುದು. ಕ್ಲೇಮ್ ಸ್ಥಿತಿಗತಿ ಮಾಹಿತಿ ನೀಡುವ ಪುಟದಲ್ಲಿ ಹಾಗೂ ನಿಮ್ಮ ಪಿಎಫ್ ಖಾತೆ ನಿರ್ವಹಿಸುವ ಉದ್ಯೋಗದಾತರು (employer) ಹೊಂದಿರುವ ಪ್ರಾದೇಶಿಕ ಪ್ರಾವಿಡೆಂಟ್ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ EPF ಖಾತೆ ಸಂಖ್ಯೆ ನಮೂದಿಸಿ 

 1. ಕ್ಲೇಮ್ ಸ್ಥಿತಿಗತಿ ನೋಡಲು ಲಿಂಕ್ Click ಮಾಡಿ 
2. ನೀವು ಕ್ಲೇಮ್ ಮಾಡಿರುವ ಖಾತೆ ಹೊಂದಿರುವ EPF ಕಚೇರಿಯನ್ನು ಡ್ರಾಪ್ ಡೌನ್ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳಿ 
3. ಪ್ರಾದೇಶಿಕ ಕಚೇರಿ ಆಯ್ಕೆ ಮಾಡಿದ ತಕ್ಷಣ ಪ್ರಾದೇಶಿಕ ಸಂಖ್ಯೆ ಸ್ವಯಂಚಾಲಿತವಾಗಿ ನಮೂದಾಗುವುದನ್ನು ಗಮನಿಸಿ 
4. Establishment ಕೋಡ್ ಮೂರನೇ ಬಾಕ್ಸ್ ನಲ್ಲಿ ಹಾಕಿ- ಗರಿಷ್ಠ 7 ಸಂಖ್ಯೆಗಳು 
5. Establishment ಕೋಡ್ ವಿಸ್ತರಣೆ ಹೊಂದಿದ್ದಾರೆ ಅಥವಾ ಉಪ ಸಂಖ್ಯೆ ಹೊಂದಿದ್ದರೆ ಅದನ್ನೂ ನಮೂದಿಸಿ .ಇಲ್ಲದಿದ್ದರೆ ಬಾಕ್ಸ್ ಖಾಲಿ ಬಿಡಿ 
 6. ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ(ಗರಿಷ್ಠ 7 ಸಂಖ್ಯೆಗಳು)
7. submit ಬಟನ್ ಒತ್ತಿ ಕ್ಲೇಮ್ ಸ್ಥಿತಿ ಗತಿ ಬಗ್ಗೆ ತಿಳಿಯಿರಿ. ಎಲ್ಲಾ ಸೌಲಭ್ಯ ಹಾಗೂ ಪ್ರಕ್ರಿಯೆ ಬಗ್ಗೆ ಯಾವುದೇ ತೊಂದರೆ ಕಂಡು ಬಂದರೆ ಹಾಗೂ ದೂರು ಸಲ್ಲಿಸಬೇಕಾದರೆ ಲಿಂಕ್ Click ಬಳಸಿ ಬಹುಕಾಲದಿಂದ ಕಾಡುತ್ತಿರುವ PF ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.